ಚಂಪಕಮಾಲೆ-
ಸಂಸ್ಕøತ ಭಾಷೆಯ ಲೌಕಿಕ ಛಂದಸ್ಸಿಗೆ ಸೇರಿದ ಒಂದು ವರ್ಣವೃತ್ತ; ಪ್ರಕೃತಿಯೆಂಬ 21 ಅಕ್ಷರಗಳ ಪಾದಪ್ರಮಾಣದ ಛಂದೋವರ್ಗದಲ್ಲಿ 7,11,600ನೆಯದಾದ ಸಮಚತುಷ್ಪದಿ; ಸಂಸ್ಕøತ ಸಾಹಿತ್ಯದಲ್ಲಿ ಬಹುವಿರಳವಾಗಿಯೂ ಕನ್ನಡ ಮತ್ತು ತೆಲಗು ಸಾಹಿತ್ಯಗಳಲ್ಲಿ ಬಹು ವಿಶೇಷವಾಗಿಯೂ ಬಳಕೆಯಾಗಿದೆ. ಇದರ ಲಕ್ಷಣವನ್ನು ಸಂಸ್ಕøತ ಭಾಷೆಯ ಛಂದೋಗ್ರಂಥಗಳಲ್ಲಿ ಶಶಿವದನಾ (ಪಿಂಗಲನ ಛಂದಸ್ಸೂತ್ರಗಳು), ಸಿದ್ಧಿ (ಸ್ವಯಂಭೂಛಂದಸ್, ಹೇಮಚಂದ್ರನ ಛಂದೋನುಶಾಸನ), ಚಿತ್ರಲತಿಕಾ (ಜಯಕೀರ್ತಿಯ ಛಂದೋನುಶಾಸನ) ಮುಂತಾದ ಹೆಸರುಗಳಿಂದ ವಿವರಿಸುವುದು ಕಂಡುಬರುತ್ತದೆ. ರುಚಿರಾ, ಸರಸೀ, ಸಲಿಲನಿಧಿ, ಧೃತಶ್ರೀ, ಪಂಚಕಾವಲೀ ಈ ಕೆಲವು ಹೆಸರುಗಳೂ ಬೇರೆ ಬೇರೆ ಛಂದೋಗ್ರಂಥಗಳಲ್ಲಿ ಅಥವಾ ಅವುಗಳಿಗಿರುವ ವ್ಯಾಖ್ಯೆಗಳಲ್ಲಿ ಪಾಠಭೇದಗಳ ಬೇರೆ ಬೇರೆ ಪ್ರತಿಗಳಲ್ಲಿ ಇದೇ ವೃತ್ತವನ್ನು ಉಲ್ಲೇಖಿಸುವಾಗ ಬಂದಿವೆ. ಕನ್ನಡ ಭಾಷೆಯ ಛಂದೋಗ್ರಂಥಗಳಲ್ಲಿ ಚಂಪಕಮಾಲೆಯೆಂದೇ ಪ್ರಸಿದ್ಧವಾಗಿದೆ (ಛಂದೋಂಬುಧಿ, ಛಂದಸ್ಸಾರ). ಸಾಹಿತ್ಯದಲ್ಲಿಯೂ ಅಷ್ಟೇ.
ಇದರ ಲಕ್ಷಣವನ್ನು ಹೇಳಿರುವ ಪ್ರಾಚೀನರು ಎಂದರೆ ಪಿಂಗಲ (ಸು. 200) ಮತ್ತು ಸ್ವಯಂಭು (ಸು. 628-783). ಪಿಂಗಲ ಕೊಡುವ ಲಕ್ಷಣ ಹೀಗೆ : ಶಶಿವದನಾ ನಜೌ ಭಜೌ ಜ ಜರೌ ರುದ್ರದಿಶಃ (ನಜಭಜಜಜರ ಎಂಬ ಗಣವಿನ್ಯಾಸ ಪ್ರತಿಪಾದದಲ್ಲಿಯೂ ಇದ್ದು, 11 ಮತ್ತು 10ನೆಯ ಅಕ್ಷರಗಳಾದ ಮೇಲೆ ಯತಿ ಬರುವುದು ಶಶಿವದನಾ ವೃತ್ತ). ಸ್ವಯಂಭು ಕೊಡುವ ಲಕ್ಷಣವಾದರೂ ಇದೇ; ಆದರೆ ಯತಿಯನ್ನು ಹೇಳಿಲ್ಲ. ನಾಗವರ್ಮ ತ್ರಿದಶ (ನಗಣ), ರವಿ (ಜಗಣ), ಇಂದು (ಭಗಣ), ಭಾಸ್ಕರತ್ರಯ (ಜಗಣಗಳು ಮೂರು) ಮತ್ತು ಅಗ್ನಿ (ರಗಣ) ಇವುಗಳಿಂದ ಕೂಡಿದ ಪಾದವುಳ್ಳದ್ದು, 13ನೆಯ ಅಕ್ಷರವಾದ ಮೇಲೆ ಯತಿಪಾಲಿತವಾಗತಕ್ಕದ್ದು ಚಂಪಕಮಾಲೆಯೆಂದು ಹೇಳಿದ್ದಾರೆ. ರೂಢಿಯಲ್ಲಿ ಈ ವೃತ್ತದ ಲಕ್ಷಣವನ್ನು ನಜಭಜಜಂಜರಂ ಬಗೆಗೊಳ್ಳುತ್ತಿರೆ ಚಂಪಕಮಾಲೆಯೆಂದಪರ್ ಎಂದು ಲಕ್ಷಣ ಲಕ್ಷ್ಯ ಒಟ್ಟಿಗೆ ತೋರುವಂತೆ ಸೂಚಿಸುವುದು ಸಾಮಾನ್ಯ (ಕನ್ನಡ ಕೈಪಿಡಿ). ಪಿಂಗಲನ ಸೂತ್ರ ಮತ್ತು ಅದರ ಭಟ್ಟ ಹಲಾಯುಧ ವ್ಯಾಖ್ಯೆ, ಮಾಘ ಕವಿಯ ಶಿಶುಪಾಲವಧೆಯ ಮಲ್ಲಿನಾಥಕೃತ ವ್ಯಾಖ್ಯೆ-ಇಲ್ಲಿ ಮಾತ್ರ ಯತಿಸೂಚನೆಯಿದ್ದು, ಅನ್ಯತ್ರ ಯಾರೂ ಅಂಥ ಸೂಚನೆಯನ್ನು ಕೊಟ್ಟಿಲ್ಲ. ಕನ್ನಡ ಕಾವ್ಯಗಳ ಚಂಪಕಮಾಲೆಯ ನಿದರ್ಶನಗಳಲ್ಲಿ ನಾಗವರ್ಮ ಹೇಳಿರುವಂತೆ 13 ಅಕ್ಷರವಾದ ಬಳಿಕಣ ಯತಿಯನ್ನು ಪಾಲಿಸುವಂತೆ ಬಹುಮಟ್ಟಿಗೆ ತೋರುವುದು ಕುತೂಹಲಕರವಾಗಿದೆ.

ಆಂಧ್ರ ದೇಶದ ಸಂಸ್ಕøತ ಮತ್ತು ತೆಲುಗು ಪಂಡಿತರು ಸಂಸ್ಕøತ ಸಾಹಿತ್ಯದಲ್ಲಿ ಚಂಪಕಮಾಲೆಯ ಅಸ್ತಿತ್ವ ಮತ್ತು ಪ್ರಾಚುರ್ಯಗಳನ್ನು ಕುರಿತು ಹಲವು ವರ್ಷಗಳ ಹಿಂದೆ ಬಹುವಾಗಿ ಚರ್ಚಿಸಿದರು. ಈ ಚರ್ಚೆಯ ಫಲವಾಗಿ, ಈ ವೃತ್ತ ಮೂಲತಃ ಸಂಸ್ಕøತ ಭಾಷೆಯ ಲೌಕಿಕ ಛಂದಸ್ಸಿನ ಒಂದು ವೃತ್ತವಾದರೂ ಅಲ್ಲಿ ಇದಕ್ಕೆ ಅಂಥ ಇತರ ವೃತ್ತಗಳಂತೆ ಪ್ರಾಚಾರ್ಯವೂ ಪ್ರಸಿದ್ಧಿಯೂ ಇಲ್ಲವೆಂಬುದು ನಿಶ್ಚಯವಾಯಿತು. ಈವರೆಗೆ ಸಂಸ್ಕøತದಲ್ಲಿ ದೊರೆತಿರುವ ಚಂಪಕಮಾಲೆಯ ನಿದರ್ಶನಗಳು ಆರೆಂಟು ಮಾತ್ರ. ಪೂರ್ವ ಚಾಳುಕ್ಯರಾಜ ಮುಮ್ಮಡಿ ಗುಣಗ ವಿಜಯಾದಿತ್ಯನ (844-88) ಸಾತಲೂರು ತಾಮ್ರಶಾಸನದೊಳಗಿನ ಅರಿನೃಪವಾಜಿ ವಾರಣ ಪದಾತಿ ಮಹಾಭ್ರವಿರಾಮ ಮಾರುತಃ-ಎಂಬ, ಮಾಘಕವಿಯ (ಸು. 750) ಶಿಶುಪಾಲವಧೆಯೊಳಗಿನ ತುರಗಶತಾಕುಲಸ್ಯ ಪರಿತಃ ಪರಮೇಕತುರಂಗ ಜನ್ಮನಃ ಎಂಬ ಆರಂಭವಿರುವ ಎರಡು ವೃತ್ತಗಳೂ ವಾಮನ (ಸು. 750-800), ರಾಜಶೇಖರ (880-920), ಮಮ್ಮಟ (ಸು. 1050-1110), ರುಯ್ಯಕ (ಸು. 1135-1150) ಮುಂತಾದ ಆಲಂಕಾರಿಕರ ಗ್ರಂಥಗಳೊಳಗಿನ ಹಾಗೂ ಸ್ವಯಂಭು ಪ್ರಾಕೃತದಲ್ಲಿಯೂ ಹೇಮಚಂದ್ರ ಸಂಸ್ಕøತದಲ್ಲಿಯೂ ಲಕ್ಷ್ಯವಾಗಿ ಕೊಟ್ಟಿರುವ ಒಂದೊಂದು-ಒಟ್ಟಿಗೆ ಎರಡು ವೃತ್ತಗಳೂ ಅಮಿತಗತಿಯ ಸುಭಾಷಿತ ರತ್ನ ಸಂದೋಹ (994) ಮೊದಲಾದ ಪದ್ಯಸಂಕಲನಗಳೊಳಗಿನ ಸುಮಾರು ಆರೇಳು ವೃತ್ತಗಳೂ-ಇಷ್ಟು ಮಾತ್ರವೇ ಈವರೆಗೆ ಸಂಸ್ಕøತಭಾಷೆಯಲ್ಲಿ ದೊರೆತಿರುವ ಚಂಪಕಮಾಲಾವೃತ್ತಗಳಾಗಿವೆ. ಇವುಗಳಲ್ಲಿ ಮಾಘಕವಿಯ ಒಂದು ವೃತ್ತದ ಹೊರತಾಗಿ ಉಳಿದವುಗಳಲ್ಲಿ ಪಿಂಗಲೋಕ್ತವಾದ ಯತಿಸ್ಥಾನ ಪಾಲಿತವಾಗಿಲ್ಲ ; ಯತಿಭಂಗ ದೋಷಗಳು ಸಾಮಾನ್ಯ. ಅಮಿತಗತಿಯ ವೃತ್ತದಲ್ಲಿ ನಾಗವರ್ಮೋಕ್ತವಾದ ಯತಿಸ್ಥಾನದ ಪಾಲನೆಯಿದೆ. ಸಾತಲೂರು ತಾಮ್ರಶಾಸನದ ವೃತ್ತದಲ್ಲಿ ಆದಿಪ್ರಾಸವಿರುವುದು ಕುತೂಹಲಕರವಾಗಿದೆ.

ಕನ್ನಡ ಭಾಷೆಯ ಶಾಸನ ಮತ್ತು ಸಾಹಿತ್ಯಗ್ರಂಥಗಳಲ್ಲಿ ಚಂಪಕಮಾಲೆ ಹೇರಳವಾಗಿ ಪ್ರಯೋಗವಾಗಿದೆ. ಖ್ಯಾತಕರ್ಣಾಟಕಗಳೆಂದು (ನೋಡಿ) ಪ್ರಸಿದ್ಧವಾಗಿರುವ ಆರು ವರ್ಣಸಮಚತುಷ್ಟದಿಗಳಲ್ಲಿ ಇದು ಸೇರಿದೆ. ಅಷ್ಟು ಮಾತ್ರವಲ್ಲದೆ, ಅಚ್ಚ ಕನ್ನಡ ಮಾತುಗಳು ಈ ವೃತ್ತದ ಛಂದಸ್ಸಿನಲ್ಲಿ ಚೆನ್ನಾಗಿ ಹೊಂದಿಕೊಳ್ಳುತ್ತವೆ-ಎಂಬ ಕಾರಣದಿಂದಲೋ ಏನೋ ಇತರ ವರ್ಣವೃತ್ತಗಳಿಗಿಂತ ಹೆಚ್ಚಾಗಿಯೇ ಇದೂ ಗುರುಲಘು ವಿನ್ಯಾಸದಲ್ಲಿ ಇದನ್ನೇ ಹತ್ತಿರದಿಂದ ಹೋಲುವ ಉತ್ಪಲಮಾಲೆಯೂ ಅಲ್ಲಿ ಬಳಕೆಯಾಗಿರುವುದು ಕಂಡುಬರುತ್ತದೆ. ಶ್ರವಣಬೆಳ್ಗೊಳದ ಪ್ರಾಚೀನ ಕನ್ನಡ ಶಾಸನಗಳಲ್ಲಿ ಕವಿರಾಜಮಾರ್ಗ ಮತ್ತು ಪಂಪಕವಿಯ ಕೃತಿಗಳು ಮೊದಲಾದ ಕಡೆಗಳಲ್ಲಿ ಬಹುಸಂಖ್ಯೆಯಲ್ಲಿ ಇದು ಕಣ್ಣಿಗೆ ಬೀಳುತ್ತ ಹೋಗುತ್ತದೆ.

ಈ ವೃತ್ತದ ಮೂಲ ಎಲ್ಲಿ ? ಉತ್ಪಲ, ಶಾರ್ದೂಲ, ಸ್ರಗ್ಧರೆ-ಇವುಗಳ ಮೊದಲಿನ ಗುರುವಿಗೆ ಎರಡು ಲಘುಗಳನ್ನು ಇಟ್ಟು ಚಂಪಕ, ಮತ್ತೇಭ, ಮಹಾಸ್ರಗ್ಧರೆಗಳನ್ನು ಕನ್ನಡ ಕವಿಗಳು ಮಾಡಿಕೊಂಡಂತೆ ಕಾಣುವುದು ಎಂಬ ಒಂದು ಅಭಿಪ್ರಾಯವಿದೆ. ಶಾರ್ದೂಲವಿಕ್ರೀಡಿತ ಸ್ರಗ್ಧರೆಗಳು ಸಂಸ್ಕøತ ಸಾಹಿತ್ಯದಲ್ಲಿ ಪ್ರಸಿದ್ಧವಾಗಿರುವುದರಿಂದ ಮತ್ತೇಭವಿಕ್ರೀಡಿತ ಮತ್ತು ಮಹಾಸ್ರಗ್ಧರೆಗಳು ಅವುಗಳಿಂದ ಹುಟ್ಟಿರುವುದು ಸಾಧ್ಯ ; ಬಹುಶಃ ಹುಟ್ಟಿವೆ. ಆದರೆ ಉತ್ಪಲಮಾಲೆ ಅಲ್ಲಿ ಸ್ವಲ್ಪವೂ ಪ್ರಸಿದ್ಧವಿಲ್ಲ. ಅದರ ಲಕ್ಷಣವನ್ನು ಈಚೆಗೆ ಜಯಕೀರ್ತಿ ಹೇಮಚಂದ್ರರ ಹೊರತು ಇತರರಾರು ಹೇಳಿಲ್ಲ, ಅವಕ್ಕೆ ನಿದರ್ಶನಗಳೂ ದೊರೆತಿಲ್ಲ. ಇದನ್ನು ಗಮನಿಸಿದರೆ ಅಷ್ಟಿಷ್ಟು ಪ್ರಸಿದ್ಧವಾಗಿರುವ ಚಂಪಕಮಾಲೆಯ ಆದಿ ದ್ವಿಲಘುವಿಗೆ ಒಂದು ಗುರುವನ್ನಿಟ್ಟು ಉತ್ಪಲಮಾಲೆಯನ್ನೇ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಕಲ್ಪಿಸಿರಬಹುದೇ ಎಂಬ ಸಂದೇಹ ಹುಟ್ಟುತ್ತದೆ. ಅಂತೂ ಇದು ವಿಚಾರಣೀಯವಾದ್ದು.
(ಟಿ.ವಿ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ